عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Exile [Al-Hashr] - Kannada translation - Hamza Butur

Surah Exile [Al-Hashr] Ayah 24 Location Madanah Number 59

ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಅವನೇ ಪ್ರಥಮ ಗಡೀಪಾರಿನಲ್ಲಿ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳನ್ನು ಅವರ ಮನೆಗಳಿಂದ ಹೊರದಬ್ಬಿದವನು.[1] ಅವರು ಹೊರಹೋಗುವರೆಂದು ನೀವು ಊಹಿಸಿಯೂ ಇರಲಿಲ್ಲ. ಅವರ ಕೋಟೆಗಳು ಅವರನ್ನು ಅಲ್ಲಾಹನ ಶಿಕ್ಷೆಯಿಂದ ಕಾಪಾಡುತ್ತವೆ ಎಂದು ಅವರು ಭಾವಿಸಿದ್ದರು. ಆದರೆ ಅವರು ನಿರೀಕ್ಷಿಸಿಯೇ ಇರದ ಕಡೆಯಿಂದ ಅಲ್ಲಾಹನ ಶಿಕ್ಷೆಯು ಅವರ ಬಳಿಗೆ ಬಂತು. ಅಲ್ಲಾಹು ಅವರ ಹೃದಯದಲ್ಲಿ ಭೀತಿಯನ್ನು ಬಿತ್ತಿದನು. ಅವರು ಅವರ ಕೈಗಳಿಂದಲೇ ಅವರ ಮನೆಗಳನ್ನು ನಾಶ ಮಾಡುತ್ತಿದ್ದರು. ಸತ್ಯವಿಶ್ವಾಸಿಗಳ ಕೈಗಳು ಕೂಡ (ಅವುಗಳನ್ನು ನಾಶ ಮಾಡಿಸುತ್ತಿದ್ದವು). ಆದ್ದರಿಂದ ಓ ದೃಷ್ಟಿಯುಳ್ಳವರೇ, ಇದರಿಂದ ಪಾಠ ಕಲಿತುಕೊಳ್ಳಿರಿ.

ಅಲ್ಲಾಹು ಅವರಿಗೆ ಊರು ಬಿಡುವುದನ್ನು ವಿಧಿಸದಿರುತ್ತಿದ್ದರೆ ಭೂಲೋಕದಲ್ಲೇ ಅವರನ್ನು ಶಿಕ್ಷಿಸುತ್ತಿದ್ದನು. ಪರಲೋಕದಲ್ಲಿ ಅವರಿಗೆ ನರಕಾಗ್ನಿಯ ಶಿಕ್ಷೆಯಿದೆ.

ಅದೇಕೆಂದರೆ ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗಿದರು. ಯಾರು ಅಲ್ಲಾಹನಿಗೆ ವಿರುದ್ಧವಾಗಿ ಸಾಗುತ್ತಾರೋ—ಅವರಿಗೆ ಅಲ್ಲಾಹು ಅತಿಕಠೋರ ಶಿಕ್ಷೆಯನ್ನು ನೀಡುತ್ತಾನೆ.

ನೀವು ಖರ್ಜೂರದ ಮರಗಳಲ್ಲಿ ಯಾವುದನ್ನೆಲ್ಲಾ ಕಡಿದಿದ್ದೀರೋ ಮತ್ತು ಯಾವುದನ್ನೆಲ್ಲಾ ಅದರ ಕಾಂಡದ ಮೇಲೆ ನಿಲ್ಲುವಂತೆ ಹಾಗೆಯೇ ಬಿಟ್ಟಿದ್ದೀರೋ—ಇವೆಲ್ಲವೂ ಅಲ್ಲಾಹನ ಅಪ್ಪಣೆಯಿಂದಲೇ ಆಗಿತ್ತು. ಅದು ಅಲ್ಲಾಹು ಆ ದುಷ್ಕರ್ಮಿಗಳನ್ನು ಅವಮಾನಿಸುವುದಕ್ಕಾಗಿತ್ತು.

ಅವರ ಆಸ್ತಿಗಳಲ್ಲಿ ಏನನ್ನೆಲ್ಲಾ ಅಲ್ಲಾಹು ಅವನ ಸಂದೇಶವಾಹಕರಿಗೆ ವಶಪಡಿಸಿಕೊಟ್ಟನೋ ಅದಕ್ಕಾಗಿ ನೀವು ಕುದುರೆಗಳನ್ನೋ ಒಂಟೆಗಳನ್ನೋ ಓಡಿಸಬೇಕಾಗಿ ಬರಲಿಲ್ಲ.[1] ಅಲ್ಲಾಹು ಅವನು ಇಚ್ಛಿಸುವವರ ಮೇಲೆ ಅವನ ಸಂದೇಶವಾಹಕರಿಗೆ ಅಧಿಕಾರವನ್ನು ನೀಡುತ್ತಾನೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ವಿವಿಧ ಊರುಗಳ ಜನರ ಆಸ್ತಿಗಳಿಂದ ಅಲ್ಲಾಹು ತನ್ನ ಸಂದೇಶವಾಹಕರಿಗೆ ಏನನ್ನು ವಶಪಡಿಸಿಕೊಟ್ಟನೋ, ಅದು ಅಲ್ಲಾಹನಿಗೆ, ಸಂದೇಶವಾಹಕರಿಗೆ, ಹತ್ತಿರದ ಸಂಬಂಧಿಕರಿಗೆ, ಅನಾಥರಿಗೆ, ಕಡುಬಡವರಿಗೆ ಮತ್ತು ಪ್ರಯಾಣಿಕರಿಗೆ ಇರುವುದಾಗಿದೆ. ಇದೇಕೆಂದರೆ, ಧನವು ನಿಮ್ಮಲ್ಲಿನ ಶ್ರೀಮಂತರ ನಡುವೆ ಮಾತ್ರ ಚಲಾವಣೆಯಾಗದಿರುವುದಕ್ಕಾಗಿ. ಸಂದೇಶವಾಹಕರು ನಿಮಗೆ ಏನು ಕೊಡುತ್ತಾರೋ ಅದನ್ನು ಸ್ವೀಕರಿಸಿರಿ ಮತ್ತು ಅವರು ನಿಮಗೆ ಏನು ವಿರೋಧಿಸುತ್ತಾರೋ ಅದರಿಂದ ದೂರವಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ತಯವಾಗಿಯೂ ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.

(ಆ ಧನವು) ತಮ್ಮ ಮನೆಗಳಿಂದ ಮತ್ತು ಆಸ್ತಿಗಳಿಂದ ಹೊರದಬ್ಬಲಾದ ಬಡ ಮುಹಾಜಿರರಿಗೆ ಇರುವುದಾಗಿದೆ. ಅವರು ಅಲ್ಲಾಹನ ಔದಾರ್ಯ ಮತ್ತು ಸಂಪ್ರೀತಿಯನ್ನು ಹುಡುಕುತ್ತಾರೆ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರಿಗೆ ಸಹಾಯ ಮಾಡುತ್ತಾರೆ. ಅವರೇ ಸತ್ಯವಂತರು.

ಅವರಿಗಿಂತ ಮೊದಲೇ ಆ ಮನೆಯಲ್ಲಿ (ಮದೀನದಲ್ಲಿ) ಮತ್ತು ಸತ್ಯವಿಶ್ವಾಸದಲ್ಲಿ ವಾಸ್ತವ್ಯವನ್ನು ಸಿದ್ಧಗೊಳಿಸಿದವರಿಗೂ (ಇರುವುದಾಗಿದೆ). ಅವರು ತಮ್ಮ ಬಳಿಗೆ ವಲಸೆ (ಹಿಜ್ರ) ಮಾಡಿದವರನ್ನು ಪ್ರೀತಿಸುತ್ತಾರೆ.[1] ಮುಹಾಜಿರರಿಗೆ ಏನು ಕೊಡಲಾಗುತ್ತದೋ ಅದರ ಬಗ್ಗೆ ಇವರಿಗೆ ಇವರ ಹೃದಯದಲ್ಲಿ ಯಾವುದೇ ಅಸಮಾಧಾನವು ಉಂಟಾಗುವುದಿಲ್ಲ. ತಮಗೆ ಎಷ್ಟೇ ಅಗತ್ಯವಿದ್ದರೂ ಸಹ ಇವರು ಅವರಿಗೆ ಆದ್ಯತೆಯನ್ನು ನೀಡುತ್ತಾರೆ. ಯಾರನ್ನು ಅವರ ಮನಸ್ಸಿನ ಜಿಪುಣತನದಿಂದ ರಕ್ಷಿಸಲಾಗಿದೆಯೋ ಅವರೇ ಯಶಸ್ವಿಯಾದವರು.

ಅವರ ಬಳಿಕ ಬಂದವರಿಗೂ (ಇರುವುದಾಗಿದೆ). ಅವರು ಹೇಳುತ್ತಾರೆ: “ನಮ್ಮ ಪರಿಪಾಲಕನೇ! ನಮಗೆ ಮತ್ತು ಸತ್ಯವಿಶ್ವಾಸದಲ್ಲಿ ನಮಗಿಂತ ಮುಂಚೂಣಿಯಲ್ಲಿರುವ ನಮ್ಮ ಸಹೋದರರಿಗೆ ಕ್ಷಮಿಸು. ಸತ್ಯವಿಶ್ವಾಸಿಗಳ ಬಗ್ಗೆ ನಮ್ಮ ಹೃದಯದಲ್ಲಿ ಯಾವುದೇ ದ್ವೇಷವನ್ನು ಉಂಟುಮಾಡಬೇಡ. ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ನೀನು ಕೃಪೆ ತೋರುವವನು ಮತ್ತು ದಯೆ ತೋರುವವನಾಗಿರುವೆ.”

ಆ ಕಪಟವಿಶ್ವಾಸಿಗಳನ್ನು ನೀವು ನೋಡಿಲ್ಲವೇ? ಗ್ರಂಥದವರಲ್ಲಿ ಸೇರಿದ ತಮ್ಮ ಸತ್ಯನಿಷೇಧಿ ಸಹೋದರರೊಂದಿಗೆ ಅವರು ಹೇಳುತ್ತಾರೆ: “ನಿಮ್ಮನ್ನು ಗಡೀಪಾರು ಮಾಡಲಾದರೆ ಖಂಡಿತವಾಗಿಯೂ ನಾವು ನಿಮ್ಮೊಂದಿಗೆ ಹೊರಹೋಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಯಾರ ಮಾತನ್ನೂ ಕೇಳುವುದಿಲ್ಲ. ನಿಮ್ಮ ವಿರುದ್ಧ ಯುದ್ಧ ನಡೆದರೆ ಖಂಡಿತವಾಗಿಯೂ ನಾವು ನಿಮಗೆ ಸಹಾಯ ಮಾಡುತ್ತೇವೆ.” ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆಂದು ಅಲ್ಲಾಹು ಸಾಕ್ಷಿ ನುಡಿಯುತ್ತಾನೆ.

ಅವರನ್ನು (ಯಹೂದಿಗಳನ್ನು) ಗಡೀಪಾರು ಮಾಡಲಾದರೆ ಇವರು (ಕಪಟವಿಶ್ವಾಸಿಗಳು) ಅವರ ಜೊತೆಗೆ ಖಂಡಿತ ಹೊರಹೋಗುವುದಿಲ್ಲ. ಅವರ ವಿರುದ್ಧ ಯುದ್ಧ ನಡೆದರೆ ಇವರು ಅವರಿಗೆ ಸಹಾಯ ಮಾಡುವುದೂ ಇಲ್ಲ. ಇವರು ಅವರಿಗೆ ಸಹಾಯ ಮಾಡಲು ಬಂದರೂ ಇವರು ಖಂಡಿತವಾಗಿಯೂ ಬೆನ್ನು ತೋರಿಸಿ ಓಡುತ್ತಾರೆ. ನಂತರ ಅವರಿಗೆ ಯಾವುದೇ ಸಹಾಯವೂ ದೊರೆಯುವುದಿಲ್ಲ.

ಅವರ ಹೃದಯಗಳಲ್ಲಿ ಅಲ್ಲಾಹನಿಗಿಂತಲೂ ಹೆಚ್ಚು ನಿಮ್ಮ ಬಗ್ಗೆ ಭಯವಿದೆ. ಅದೇಕೆಂದರೆ, ಅವರು (ಸತ್ಯಸಂಗತಿಯನ್ನು) ಅರ್ಥಮಾಡಿಕೊಳ್ಳದ ಜನರಾಗಿದ್ದಾರೆ.

ಅವರೆಲ್ಲರೂ ಒಟ್ಟಾಗಿಯೂ ಕೂಡ ನಿಮ್ಮೊಡನೆ ಯುದ್ಧ ಮಾಡಲಾರರು—ಸುಭದ್ರ ಕೋಟೆಗಳಿರುವ ನಗರಗಳಿಂದ ಅಥವಾ ಗೋಡೆಗಳ ಹಿಂಭಾಗದಿಂದ ಹೊರತು. ಅವರೊಳಗಿನ ಆಂತರಿಕ ಕಲಹವು ಬಹಳ ತೀಕ್ಷ್ಣವಾಗಿದೆ. ಅವರು ಒಗ್ಗಟ್ಟಿನಲ್ಲಿದ್ದಾರೆಂದು ನೀವು ಭಾವಿಸುತ್ತೀರಿ. ಆದರೆ ಅವರ ಹೃದಯಗಳು ಭಿನ್ನವಾಗಿವೆ. ಅದೇಕೆಂದರೆ, ಅವರು (ಸತ್ಯಸಂಗತಿಯನ್ನು) ಅರ್ಥಮಾಡಿಕೊಳ್ಳದ ಜನರಾಗಿದ್ದಾರೆ.

(ಅವರ ಸ್ಥಿತಿಯು) ಅವರಿಗಿಂತ ಸ್ವಲ್ಪ ಮೊದಲಿನವರ ಸ್ಥಿತಿಯಂತೆ![1] ಅವರು ತಮ್ಮ ಕಾರ್ಯದ ದುಷ್ಫಲವನ್ನು ಅನುಭವಿಸಿದರು. ಅವರಿಗೆ ವೇದನಾಭರಿತ ಶಿಕ್ಷೆಯಿದೆ.

ಶೈತಾನನ ಸ್ಥಿತಿಯಂತೆ! ಅವನು ಮನುಷ್ಯನೊಡನೆ “ಸತ್ಯನಿಷೇಧಿಯಾಗು” ಎಂದು ಹೇಳಿದ ಸಂದರ್ಭ. ಮನುಷ್ಯ ಸತ್ಯನಿಷೇಧಿಯಾದಾಗ ಅವನು ಹೇಳುತ್ತಾನೆ: “ನಿಶ್ಚಯವಾಗಿಯೂ ನಾನು ನಿನ್ನಿಂದ ದೂರ ಸರಿದಿದ್ದೇನೆ. ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನನ್ನು ಭಯಪಡುತ್ತೇನೆ.”

ಹೀಗೆ ಅವರಿಬ್ಬರ ಅಂತ್ಯವು ಅವರಿಬ್ಬರೂ ನರಕದಲ್ಲಿ ಶಾಶ್ವತವಾಗಿ ವಾಸಿಸುವುದಾಗಿದೆ. ಅದು ಅಕ್ರಮಿಗಳಿಗಿರುವ ಪ್ರತಿಫಲವಾಗಿದೆ.

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ. ಪ್ರತಿಯೊಬ್ಬರೂ ನಾಳೆಗಾಗಿ (ಪುನರುತ್ಥಾನ ದಿನಕ್ಕಾಗಿ) ಏನು ಮಾಡಿದ್ದೇನೆಂದು ನೋಡಿಕೊಳ್ಳಲಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.

ನೀವು ಅಲ್ಲಾಹನನ್ನು (ಅಲ್ಲಾಹನ ನಿಯಮಗಳನ್ನು) ಮರೆತುಬಿಟ್ಟ ಜನರಂತೆ ಆಗಬೇಡಿ. ಆಗ ಅವರು ಅವರನ್ನೇ ಮರೆಯುವಂತೆ ಅಲ್ಲಾಹು ಮಾಡಿದನು. ಅವರೇ ದುಷ್ಕರ್ಮಿಗಳು.

ನರಕವಾಸಿಗಳು ಮತ್ತು ಸ್ವರ್ಗವಾಸಿಗಳು ಸಮಾನರಲ್ಲ. ಸ್ವರ್ಗವಾಸಿಗಳೇ ಯಶಸ್ವಿಯಾದವರು.

ನಾವು ಈ ಕುರ್‌ಆನನ್ನು ಒಂದು ಪರ್ವತದ ಮೇಲೆ ಅವತೀರ್ಣಗೊಳಿಸುತ್ತಿದ್ದರೆ ಅಲ್ಲಾಹನ ಭಯದಿಂದ ಅದು ವಿನಮ್ರವಾಗಿ ಒಡೆದು ಚೂರಾಗುವುದನ್ನು ನೀವು ಕಾಣುತ್ತಿದ್ದಿರಿ. ನಾವು ಜನರಿಗೆ ಈ ಉದಾಹರಣೆಗಳನ್ನು ವಿವರಿಸಿಕೊಡುತ್ತೇವೆ. ಅವರು ಆಲೋಚಿಸುವುದಕ್ಕಾಗಿ.

ಅವನೇ ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ದೃಶ್ಯ-ಅದೃಶ್ಯವನ್ನು ತಿಳಿದವನು. ಅವನು ಪರಮ ದಯಾಮಯನು ಮತ್ತು ಕರುಣಾನಿಧಿಯಾಗಿದ್ದಾನೆ.

ಅವನೇ ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಸಾಮ್ರಾಟನು, ಪರಮ ಪರಿಶುದ್ಧನು, (ಎಲ್ಲಾ ಕುಂದು-ಕೊರತೆಗಳಿಂದ ಮತ್ತು ಅಪೂರ್ಣತೆಗಳಿಂದ) ಸುರಕ್ಷಿತನು, ಅಭಯದಾತನು, ಮೇಲ್ನೋಟ ವಹಿಸುವವನು, ಪ್ರಬಲನು, ಸರ್ವಾಧಿಕಾರಿ ಮತ್ತು ಮಹಾಮಹಿಮನು. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

ಅವನೇ ಅಲ್ಲಾಹು! ಸೃಷ್ಟಿಕರ್ತನು, ಅಸ್ತಿತ್ವವನ್ನು ನೀಡುವವನು ಮತ್ತು ರೂಪ ನೀಡುವವನು. ಅವನಿಗೆ ಅತ್ಯುತ್ತಮವಾದ ಹೆಸರುಗಳಿವೆ. ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳೂ ಅವನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.